    ಕಾಠಿಯಾವಾಡ್  

ಪಶ್ಚಿಮ ಭಾರತದ ಒಂದು ಪರ್ಯಾಯದ್ವೀಪ. ಗುಜರಾತ್ ರಾಜ್ಯದಲ್ಲಿದೆ. ಇದಕ್ಕೆ ಉತ್ತರದಲ್ಲಿ ಕಚ್ ಖಾರಿಯೂ ಕಚ್ ರಣದ ಚೌಗುನೆಲವೂ ಪೂರ್ವದಲ್ಲಿ ಕ್ಯಾಂಬೆ ಖಾರಿಯೂ ದಕ್ಷಿಣ-ಪಶ್ಚಿಮಗಳಲ್ಲಿ ಅರಬ್ ಕೊಲ್ಲಿಯೂ ಇವೆ. ಗುಜರಾತಿನ ಇತರ ಭಾಗಗಳೊಂದಿಗೆ ಇದಕ್ಕೆ ಸಂಪರ್ಕವಿರುವುದು ಈಶಾನ್ಯದ ಕಂಠಪ್ರದೇಶದ ಮೂಲಕ. ಕಾಠಿಯಾವಾಡದ ಈ ಪ್ರತ್ಯೇಕತೆಯಿಂದಾಗಿ ಇದು ಇತಿಹಾಸದ ಉದ್ದಕ್ಕೂ ತನ್ನ ವೈಶಿಷ್ಟವನ್ನು ಉಳಿಸಿ ಬೆಳೆಸಿಕೊಂಡೇ ಬಂದಿದೆ. ಗುಜರಾತಿನ ಜಾಂನಗರ, ಜುನಾಗಢ, ಅಮ್ರೇಲಿ, ಭಾವನಗರ, ಸುರೇಂದ್ರನಗರ ಜಿಲ್ಲೆಗಳನ್ನೊಳಗೊಂಡಿರುವ ಪ್ರದೇಶವಿದು.

 ಕರಾವಳಿಯ ಮೈದಾನವನ್ನುಳಿದು ಕಾಠಿಯಾವಾಡ್ ಅಗ್ನಿಶಿಲಾವೃತ ಪ್ರಸ್ಥಭೂಮಿ. ಸಮುದ್ರಮಟ್ಟಕ್ಕೆ 100ಮೀ.ಗಿಂತ ಎತ್ತರಕ್ಕೆ ಇದು ಏರುತ್ತದೆ. ಪ್ರಸ್ಥಭೂಮಿಯ ಮಧ್ಯಭಾಗದಿಂದ ಎಲ್ಲ ದಿಕ್ಕುಗಳಲ್ಲೂ ಚಿಲ್ಲಾಪಿಲ್ಲಿಯಾಗಿ ಹರಿಯುವ ಅನೇಕ ನದಿ ತೊರೆಗಳು ನೆಲವನ್ನು ನೆತ್ತಿಗಭಿಮುಖವಾಗಿ ಕೊರೆಯುತ್ತಲೇ ಇವೆ. ಅಲ್ಲಲ್ಲಿ 200 ಮೀ.ಗಿಂತಲೂ ಎತ್ತರಕ್ಕಿರುವ ಬೆಟ್ಟಗಳೂ ಬಂಡೆಸಾಲುಗಳೂ ಇಲ್ಲುಂಟು. ಪ್ರಸ್ಥಭೂಮಿಯ 200-300 ಮೀ. ಮಟ್ಟದ ನೇರದಲ್ಲಿ ಜೋಬ್ರದ ಬಳಿ ಗರಿಷ್ಠ ಎತ್ತರಕ್ಕೆ ನಿಲುಕುವ (340-ಮೀ.) ಬೆಟ್ಟಗಳ ಗುಂಪಿನ ಹೆಸರು ಮಂಡ. ರಾಜಕೋಟೆ ಗೊಂಡಾಲ್ ಅಕ್ಷಕ್ಕೆ ಪೂರ್ವದಲ್ಲಿ ಅಯಾಕಾರದಲ್ಲಿ ಈ ಹೆಣಿಕೆ ಹಬ್ಬಿದೆ. ಗಿರ್ ಬೆಟ್ಟ ಶ್ರೇಣಿ ಕಚ್ಚುಕಚ್ಚಾಗಿದೆ. ಪೂರ್ವ-ಪಶ್ಚಿಮವಾಗಿ ಇದು. ಸು.180ಕಿಮೀ. ಗಳಷ್ಟು ದೂರ ಹಬ್ಬಿದೆ. ದಕ್ಷಿಣ ತೀರದಿಂದ ಕೇವಲ 75 ಕಿಮೀ. ದೂರದಲ್ಲಿರುವ ಈ ಶ್ರೇಣಿಯ ಉತ್ತರ ತುದಿಯಲ್ಲಿ ಪಶ್ಚಿಮದ ಕಡೆಗೆ ಓಜತ್ ನದಿಯೂ ಪೂರ್ವ ಕಡೆಗೆ ಶೆತ್ರಂಜಿ ನದಿಯೂ ಹರಿಯುತ್ತವೆ. ಈಶ್ರೇಣಿಯ ಅತ್ಯುನ್ನತ ಶಿಖರ ಸರ್ಕಲನ್ (643 ಮೀ.) ಗಿಂತ ಬೆಟ್ಟಗಳ ದಕ್ಷಿಣದ ತಪ್ಪಲು ಅರಣ್ಯಾವೃತ್ತವಾದದ್ದು. ಭಾರತದ ಸಿಂಹಗಳು ಇರುವುದು ಇಲ್ಲಿ ಮಾತ್ರ. ವಿರಳವಾಗುತ್ತಿರುವ ಈ ಮೃಗಗಳು ನಾಮಾವಶೇಷವಾಗದಂತೆ ರಕ್ಷಿಸುವ ಉದ್ದೇಶದಿಂದ ಗಿರ್ ಕಾಡನ್ನು ಅಭಯಾರಣ್ಯವನ್ನಾಗಿ ಸರ್ಕಾರ ಪರಿಗಣಿಸಿದೆ. ಕಾಠಿಯಾವಾಡದ ಅತ್ಯಂತ ಎತ್ತರದ ಬೆಟ್ಟ ಗಿರ್ನಾರ್. ಇದರ ಅತ್ಯುನ್ನತ ಶಿಖರ ಗೋರಖನಾಥ್ (1,117 ಮೀ.). ಇದು ಒಮ್ಮೆ ಅಗ್ನಿಪರ್ವತದ ಶಿರಸ್ಸಿನ ಪ್ರದೇಶವಾಗಿತ್ತೆಂದು ಭಾವಿಸಲಾಗಿದೆ. ಈ ಬೆಟ್ಟ ಗಿರ್ ಶ್ರೇಣಿಯಿಂದ ಪ್ರತ್ಯೇಕಗೊಂಡಿರುವುದಕ್ಕೆ ಓಜತ್ ನದಿಯ ನೆಲಗೊರೆತವೇ ಕಾರಣ. ಬಾರ್ದ-ಆಲೆಚ್ ಜೋಡಿ ಬೆಟ್ಟಗಳು ಗಿರ್ನಾರಿಗೆ ವಾಯವ್ಯದಲ್ಲಿವೆ. ಇವು ಪೋರ್ಬಂದರಿಗೆ ಸಮೀಪ. ಪಶ್ಚಿಮದ ಕಡೆ ಇರುವ ಬೆಟ್ಟ ಹೆಚ್ಚು ಎತ್ತರ. ಇದರ ಶಿಖರವೊಂದು 637 ಮೀ. ಎತ್ತರವನ್ನು ನಿಲುಕುತ್ತದೆ. ಇನ್ನೊಂದು ಬೆಟ್ಟದ ಗರಿಷ್ಠ ಔನ್ನತ್ಯ 298 ಮೀ. ಮಾತ್ರ..

 ಈ ಮೂರು ಬೆಟ್ಟಸಾಲುಗಳು ನಡುವೆ ನದೀಕಣಿವೆಗಳೂ ಮೆಲ್ಲನೆ ಇಳಿಯುವ ಪ್ರಸ್ಥಭೂಮಿಗಳೂ ಹಬ್ಬಿವೆ. ವಾಸ್ತವವಾಗಿ ಕಾಠಿಯಾವಾಡದ ನಡುಭಾಗದಲ್ಲಿ ಚಿಕ್ಕ ಚಿಕ್ಕ ಹಲವು ಪ್ರಸ್ಥಭೂಮಿಗಳನ್ನು ಚಾವಣಿಯ ಹೆಂಚಿನಂತೆ ಜೋಡಿಸಿದಂತಿದೆ. ಇಡೀ ಪ್ರಸ್ಥಭೂಮಿ ನಡುನಡುವೆ ನದಿಗಳು ಭೂಸಾರವನ್ನು ಕೊರೆದುಹಾಕಿರುವುದರಿಂದ ಈ ಪ್ರಸ್ಥಭೂಮಿಯ ಮಣ್ಣಿನ ಹೊದಿಕೆ ತೀರ ತೆಳುವು. ಇಲ್ಲಿ ಮಳೆ ಕಡಿಮೆ. ಮರುಳು ಕಲ್ಲುಗಳಿಂದ ಕೂಡಿದ ಸಾಧಾರಣ ಕಪ್ಪುಮಣ್ಣಿನ ನೆಲ ಅಷ್ಟೇನೂ ಫಲವತ್ತಾಗಿಲ್ಲ. ಪ್ರಸ್ಥಭೂಮಿಯಲ್ಲಿ ಅಲ್ಲಲ್ಲಿ ಅಡ್ಡಡ್ಡಲಾಗಿ ಹಬ್ಬಿರುವ ದಿಬ್ಬಗಳು ನೀರಾವರಿಗಾಗಿ ಜಲಾಶಯ ನಿರ್ಮಾಣಕ್ಕೆ ಸಹಾಯಕವಾಗಿವೆ. ಕಾಠಿಯಾವಾಡದ ನಡುಭಾಗದ ನೆಲದಲ್ಲಿ ಸೇ.60ರಷ್ಟು ಸಾಗುವಳಿಗೆ ಒಳಪಟ್ಟಿದೆ. ಸರಾಸರಿಯಲ್ಲಿ ಇದು ತಲೆಗೆ ಒಂದು ಎಕರೆಯಾಗುತ್ತದೆ. ನೆಲಗಡಲೆ ಮುಖ್ಯ ಬೆಳೆ. ಹೆಚ್ಚು ಫಲವತ್ತಾದೆಡೆಗಳಲ್ಲಿ ಹತ್ತಿ ಬೆಳೆಯುವುದುಂಟು. ಕೈಗಾರಿಕೆಯ ದೃಷ್ಟಿಯಿಂದ ಈ ಪ್ರದೇಶ ಮೈದಾನದಷ್ಟು ಮುಖ್ಯವಲ್ಲ. ಒಟ್ಟಿನಲ್ಲಿ ನಡುವಿನ ಉಬ್ಬುನೆಲವನ್ನು ರಾಜಕೋಟೆ, ಗೊಂಡಾಲ್-ಜೇತ್‍ಪುರ, ಧ್ರಂಗಾಧ್ರ-ವಾಧ್ವಾನ್ ಮತ್ತು ಅಮ್ರೇಲಿ-ಪಾಲಿಟಾನ ಪ್ರಸ್ಥಭೂಮಿಗಳಾಗಿ ವಿಂಗಡಿಸಬಹುದು. ರಾಜಕೋಟೆ, ಗೊಂಡಾಲ್, ಜೇತ್‍ಪುರ್. ಧೊರಾಜಿ, ಉಪ್ಲೇತ, ಜುನಾಗಢ, ಸುರೇಂದ್ರನಗರ, ಧ್ರಂಗಾಧ್ರ, ವಾಧ್ವಾನ್, ಮೋರ್ವಿ, ವಂಕನೇರ್, ಅಮೇಲಿ, ಪಾಟಿಟಾನ-ಇವು ಈ ಪ್ರದೇಶದ ಮುಖ್ಯ ಪಟ್ಟಣಗಳು.

 ಉತ್ತರದ ತಗ್ಗುನೆಲ ಕಚ್ಚಿನ ದಕ್ಷಿಣದ  ತಗ್ಗುನೆಲವನ್ನೇ ಹೋಲುತ್ತದೆ. ಕಚ್‍ಖಾರಿಯ ಅಂಚಿಗೆ 5-8 ಕಿಮೀ. ಅಗಲದ ಪ್ರದೇಶ ಚೌಳುಮಣ್ಣಿನ ಜೌಗುನೆ¯. ಇತ್ತ ಹರಿದು ಬರುವ ಅನೇಕ ನದಿಗಳು ಮುಂಗಾಣದೆ ಹರಡಿಕೊಂಡಿವೆ. ಇಲ್ಲಿ ಕಡಲು ಈಚೆಗೆ ಹಿಂದೆ ಸರಿದಿರಬೇಕೆಂಬುದು ಊಹೆ. ಕಿರಿ ಅಗಲದ ತಗ್ಗುನೆಲದ ಪಶ್ಚಿಮದಲ್ಲಿ ಚಾಚಿಕೊಂಡಿರುವ ಓಖಾ-ದ್ವಾರಕಾ ಪ್ರದೇಶ ಅಭಿವೃದ್ಧಿಹೊಂದಿದ ಭಾಗ. ಓಖಾಮಂಡಲವೆಂದು ಇದು ಪ್ರಸಿದ್ಧವಾಗಿದೆ. ಓಖಾ ಒಂದು ಮುಖ್ಯ ಬಂದರು. ದ್ವಾರಕ ಇನ್ನೊಂದು ಮುಖ್ಯ ಪಟ್ಟಣ. ಧಾರ್ಮಿಕ ಕ್ಷೇತ್ರ. ಓಖಾಮಂಡಲಕ್ಕೆ ಪೂರ್ವದಲ್ಲಿ ನೆಲ ಇಳುಕಲಾಗಿದೆ. ಜಾಂನಗೆ ಸಾಂಸ್ಕøತಿಕ ವಾಣಿಜ್ಯಕ ಕೇಂದ್ರ ಖಂಭಾಲಿಯ ಇನ್ನೊಂದು ಮುಖ್ಯ ಪಟ್ಟಣ. ಪಶ್ಚಿಮದಂಚಿನಲ್ಲಿ ದ್ವಾರಕೆಯಿಂದ ಪೋರ್ ಬಂದರಿನ ವರೆಗೆ ವಾಯವ್ಯದಿಂದ ಆಗ್ನೇಯಾಭಿಮುಖವಾಗಿ ಮೈದಾನ ಮರಳು ಗುಡ್ಡೆಗಳಿಂದ ಕೂಡಿ ಜೌಗುಮಯವಾಗಿದೆ. ಸಮುದ್ರದತ್ತ ಧಾವಿಸಿಬರುವ ಅಸಂಖ್ಯ ತೊರೆಗಳಿಗೆ ಇವು ಪ್ರತಿಬಂಧಕಗಳು. ಇಲ್ಲಿಯ ಜನಕ್ಕೆ ವ್ಯವಸಾಯ ಮುಖ್ಯ ಕಸುಬು. ಅದು ಅಷ್ಟೇನೂ ಲಾಭದಾಯಕವಲ್ಲ. ಪೋರ್‍ಬಂದರಿನಿಂದ ಮುಂದೆ ವೇರಾವಲ್‍ವರೆಗಿನ ಕರಾವಳಿ ಅದರ ಹಿಂದಿನ ಭಾಗಕ್ಕಿಂತ ಭಿನ್ನ. ಇಲ್ಲಿ ಮಳೆ ಹೆಚ್ಚು, ಉತ್ಪಾದಕತೆಯೂ ಅಧಿಕ. ಜನಸಾಂದ್ರತೆಯು ಹೆಚ್ಚು. ಸಾರಿಗೆ ವ್ಯವಸ್ಥೆ ಅಭಿವೃದ್ಧಿ ಹೊಂದಿದೆ. ಇದರ ದಕ್ಷಿಣ ಭಾಗ ವ್ಯವಸಾಯಕ್ಕೆ ಹೆಚ್ಚು ಅನುಕೂಲಕರ. ಪೋರ್‍ಬಂದರ್, ವೇರಾವಲ್-ಇವು ಮುಖ್ಯ ಬಂದರು ಪಟ್ಟಣಗಳು. ಪರ್ಯಾಯ ದ್ವೀಪದ ದಕ್ಷಿಣದ ವಕ್ರರೇಖೆಯ ಭಾಗ ಗಿರ್ ಅರಣ್ಯಕ್ಕೆ ಸೆರಗಿನಂತಿದೆ. ಇಲ್ಲಿಯ ಸುಣ್ಣಕಲ್ಲು ಪ್ರಸಿದ್ಧ. ಪೋರ್ಚುಗೀಸರಿಗೆ ಸೇರಿದ್ದ ಡಿಯು ಇರುವುದು ಇಲ್ಲಿ. ಇದಕ್ಕೆ ಪೂರ್ವದಲ್ಲಿ ಕ್ಯಾಂಬೆ ಖಾರಿಗೆ ಹೊಂದಿಕೊಂಡಂತಿರುವ ಕಿರು ಅಂಚಿನ ಮೈದಾನ ಗೋಹಿಲ್‍ವಾಡ್ ಎಂದು ಪ್ರಸಿದ್ಧವಾಗಿದೆ. ಗೋಹಿಲ್ ರಜಪ್ರತರಿಂದ ಅದಕ್ಕೆ ಈ ಹೆಸರು ಬಂತು. ಭಾವನಗರ, ಮಹವಾ, ತಲಾಜಾ, ಸಿಹೋರ್, ಘೋಘಾತಗಳು ಇಲ್ಲಿಯ ಪಟ್ಟಣಗಳು.

 ಧ್ರಂಗಾಧ್ರ - ವಾಧ್ವಾನ್ ಪ್ರಸ್ಥಭೂಮಿಗೂ ಸಬರ್ಮತಿ ನದಿಗೂ ನಡುವೆ, P್ಪಚ್ಚಿನ ಕಿರು ರಣದಿಂದ ಕ್ಯಾಂಬೆ ಖಾರಿಯ ವರೆಗೆ ಕತ್ತುಪಟ್ಟಯಂತೆ ಹಬ್ಬಿರುವ ಮೈದಾನ ಮಂದಗಾಮಿ ನದಿಗಳಿಂದಲೂ ಹೆಣೆದುಕೊಂಡ ಕಾಲುವೆಗಳಿಂದಲೂ ಕೂಡಿದ್ದಾಗಿದೆ. ಬಹಳ ಹಿಂದೆ ಇದು ಸಮುದ್ರದ ಭಾಗವಾಗಿತ್ತೆಂದೂ ಕಾಠಿಯಾವಾಡ ಪರ್ಯಾಯದ್ವೀಪ ಆಗ ಒಂದು ದ್ವೀಪವಾಗಿತ್ತೆಂದೂ ಕಾಣುತ್ತದೆ. ಇಡೀ ಪ್ರದೇಶದ ಉತ್ಸಾರಣ ವ್ಯವಸ್ಥೆ ಅಸಮರ್ಪಕವಾದದ್ದು. ಇದರ ನಡುಗಡೆಯಲ್ಲಿರುವುದೇ ನಾಲ್ ಉಪ್ಪು ನೀರಿನ ಸರೋವರ. ಈ ಸರೋವರದ ಸುತ್ತಣ ಪ್ರದೇಶ ದೀರ್ಘಕಾಲದ ಅವಸಾದನದ (ಸೆಡಿಮೆಂಟೇಷನ್) ಫಲವಾಗಿ ನೆಲವಾಗಿ ಪರಿವರ್ತನೆ ಹೊಂದಿದೆ. ಸುಪ್ರಸಿದ್ಧ ಹರಪ್ಪ ಸಂಸ್ಕøತಿಯ ಉತ್ಖನನ ನೆಲೆ ಇರುವುದು ಈ ಪ್ರದೇಶದಲ್ಲಿ. ವ್ಯಾಪಕ ಅವಸಾದನದಕ್ರಿಯೆಗೆ ಈ ಪ್ರದೇಶ ಬಲಿಯಾಗಿದ್ದಿರಬೇಕೆಂದು ಊಹಿಸಲಾಗಿದೆ. ಈ ಪ್ರದೇಶದಲ್ಲಿ ಕೃಷಿ ಅಷ್ಟೇನೂ ಪ್ರವರ್ಧಮಾನ ಸ್ಥಿತಿಯಲ್ಲಿಲ್ಲ. ಸಾರಿಗೆ ವ್ಯವಸ್ಥೆ ಬಲು ವಿರಳ. ಎರಡು ಮುಖ್ಯ ಹೆದ್ದಾರಿಗಳು ಮಾತ್ರ ಇದನ್ನು ದಾಟಿ ಸಾಗುತ್ತವೆ.

 ಕಾಠಿಯಾವಾಡ್ ಒಟ್ಟಿನಲ್ಲಿ ಕಡಿಮೆ ಮಳೆಯ ಪ್ರದೇಶ. ಬರುವ ಮಳೆಯೂ ಅನಿಶ್ಚಿತ. ಒಳಭಾಗದ ಎತ್ತರ ಪ್ರದೇಶದಲ್ಲೂ ಕ್ಯಾಂಬೆ ತೀರದಲ್ಲೂ 50 ಸೆಂಮೀ. ಸರಾಸರಿಯಲ್ಲಿ ಮಳೆಯಾಗುತ್ತದೆ. ಉಳಿದ ಕಡೆಗಳಲ್ಲಿ ಕಡಿಮೆ. ಮಧ್ಯದ ಉಷ್ಣತೆ ಜನವರಿಯಲ್ಲಿ 26,50 ಸೆಂ.ನಿಂದ 29,50 ಸೆಂ.;ಮೇಯಲ್ಲಿ 320 ಸೆಂ. ಮಧ್ಯಕ ಗರಿಷ್ಠ ಉಷ್ಣತೆ 430 ಸೆಂ,ನ್ನೂ ಮೀರುವುದುಂಟು. ಮುಳ್ಳುಮರಗಳೂ ಅಲ್ಲಲ್ಲಿ ಪರ್ಣಪಾತಿ ವೃಕ್ಷಗಳೂ ಇಲ್ಲಿಯ ಬೆಟ್ಟಗಾಡಿನಲ್ಲಿ ಬೆಳೆಯುತ್ತವೆ. ಉಳಿದ ಕಡೆ ಹುಲ್ಲು ಪೊದೆ ವಿಶೇಷ.

 ಇಲ್ಲಿಯ ಎಲ್ಲ ಜಲಮೂಲಗಳನ್ನೂ ಬಹಳ ಎಚ್ಚರಿಕೆಯಿಂದ ಸಾಗುವಳಿಗಾಗಿ ಉಪಯೋಗಿಸಲಾಗುತ್ತಿದೆ. ಬಾಜ್ರ ಮತ್ತು ಗೋಧಿ ಇಲ್ಲಿಯ ಮುಖ್ಯ ಬೆಳೆಗಳು. ಹತ್ತಿ ಮೆಕ್ಕೆಜೋಳಗಳನ್ನೂ ಬೆಳೆಯುತ್ತಾರೆ. ದಕ್ಷಿಣ ತೀರದ ಉದ್ದಕ್ಕೂ ಕೊಬ್ಬರಿಗಾಗಿ ತೆಂಗಿನ ಮರಗಳನ್ನೂ ಸೌದೆಗಾಗಿ ಸರ್ವೆ ಮರಗಳನ್ನೂ ನೆಡಲಾಗಿದೆ. ವಾಯವ್ಯ ತೀರದ ಬಳಿ ಕಾಳು ಮತ್ತು ಎಣ್ಣೆಬೀಜಗಳನ್ನು ಬೆಳೆಯುತ್ತಾರಾದರೂ ವ್ಯವಸಾಯಕ್ಕಿಂತ ಪಶುಪಾಲನೆಯೇ ಅಲ್ಲಿ ಮುಖ್ಯ. ಶಿಲೋತ್ಖನನ (ಕ್ವಾರಿಯಿಂಗ್) (ಪೋರ್‍ಬಂದರ್), ಹತ್ತಿಜವಳಿ (ಭಾವನಗರ), ರಸಾಯನವಸ್ತು (ದ್ವಾರಕ), ಚರ್ಮಕೆಲಸ ಬೆಂಕಿಕಡ್ಡಿ, ಮೃತ್ಪಾತ್ರೆ-ಇವು ಮುಖ್ಯ ಕೈಗಾರಿಕೆಗಳು. ಭಾವನಗರ ಅತ್ಯಂತ ದೊಡ್ಡ ನಗರ, ಕ್ಯಾಂಬೆ ಖಾರಿಯ ಬಳಿ ಇರುವ ಬಂದರು. ಓಖಾ ಬಂದರು ಚಿಕ್ಕದಾದರೂ ಆಧುನಿಕವಾದದ್ದು. ಬೇಡಿ ಮೂರನೆಯ ಬಂದರು. ಜಾಂ£ಗರ ಬಳಿ ನಾಡಿನ ವಾಣಿಜ್ಯಕೇಂದ್ರ, ಸುರೇಂದ್ರನಗರ, ಜುನಾಗಢ, ಅಮ್ರೇಲಿ, ರಾಜಕೋಟೆ ಇತರ ಕೆಲವು ಪಟ್ಟಣಗಳು.

 ಕ್ರಿ.ಪೂ. 3 ನೆಯ ಸಹಸ್ರಮಾನದಿಂದಲೂ ಕಾಠಿಯಾವಾಡದಲ್ಲಿ ಜನ ನೆಲೆಸಿದ್ದರೆಂಬುದು ಪುರಾತತ್ವಜ್ಞರ ಅಭಿಪ್ರಾಯ, ಲೋಥಾಲ್ ಮತ್ತು ಇತರ ಎಡೆಗಳಲ್ಲಿ ಹರಪ್ಪ ನಾಗರಿಕತೆಯ ಕಾಲದ ನೆಲೆಗಳು ದೊರಕಿವೆ. ಪ್ರಬಾಸ್ ಪಟನ್ ಅಥವಾ ಪಟನ್ ಸೋಮನಾಥದಲ್ಲಿ ಹರಪ್ಪ ನಾಗರಿಕತೆಯ ಕೊನೆಯ ಕಾಲದಿಂದ ಇತಿಹಾಸ ಕಾಲದ ಆದಿಯ ವರೆಗೂ ನಾನಾ ಹಂತಗಳನ್ನು ಕಾಣಬಹುದು. ಕ್ರಿ,ಪೂ, 3ನೆಯ ಶತಮಾನದಲ್ಲಿ ಇದು ಮೌರ್ಯರ ಆಳ್ವಿಕೆಗೆ ಒಳಪಟ್ಟಿತ್ತು. ಗಿರ್ನಾರ್ ಬಳಿ ಅಶೋಕನ ಶಾಸನಗಳು ದೊರಕಿವೆ. ಅನಂತರ ಇದು ಶಕರ ವಶಕ್ಕೆ ಬಂತು. ಕ್ರಿಸ್ತಶಕದ ಆದಿಯಲ್ಲಿ ಕ್ಷತ್ರಪರು ಇದನ್ನು ಆಳುತ್ತಿದ್ದರು. ಗುಪ್ತರ ಸಾಮ್ರಾಜ್ಯ ಕ್ಷೀಣದೆಸೆಗೆ ಬಂದಾಗ ವಲಭಿಗಳು ಅಧಿಕಾರ ಕಸಿದುಕೊಂಡರು. ಮುಸ್ಲಿಮರ ಆಕ್ರಮಣಕ್ಕೆ ಮೊಟ್ಟಮೊದಲು ತುತ್ತಾದ ಭಾರತಭಾಗಗಳಲ್ಲಿ ಇದೂ ಒಂದು. ಘಜ್ನಿ ಮಹಮ್ಮದ್ ಇದರ ಮೇಲೆ ದಂಡೆತ್ತಿಹೋಗಿ ಸೋಮನಾಥಪುರವನ್ನು ನಾಶಪಡಿಸಿದ (1024). ಆನಂತರ ಇದು ಮೊಗಲರ ಅಧೀನಕ್ಕೆ ಬಂತು. ಬ್ರಿಟಷರು ಆಗಮಿಸಿದಾಗ ಇಲ್ಲಿದ್ದ ಅನೇಕ ಸಣ್ಣ ಸಂಸ್ಥಾನಗಳ ಅರಸರು ಅವರ ಆಶ್ರಿತರಾಗಿ ತಲೆಬಾಗಿದರು. ಭಾರತ ಸ್ವತಂತ್ರವಾದ ಮೇಲೆ ಇದು ಸೌರಾಷ್ಟಭಾಗವಾಗಿದ್ದು ಈಗ ಗುಜರಾತ್ ರಾಜ್ಯದಲ್ಲಿ ಅಂತರ್ಗತವಾಗಿದೆ.       

 (ಬಿ.ಜಿ.ಟಿ.ಎ.; ಕೆ.ಆರ್.ಆರ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ